ಶ್ರೀ ಸದ್ಗುರುಭ್ಯೋ ನಮ:

|| ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ

ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಂ||

ಭಾರತೀಯ ಸನಾತನ ಧರ್ಮದ ಪರಂಪರೆಯಲ್ಲಿ ಸದ್ಗುರುವಿನ ಅವತಾರವು ಯುಗ ಧರ್ಮಗಳಿಗನುಸಾರವಾಗಿ ನಡೆಯುತ್ತಲೇ ಸಾಗಿದೆ. ಆದಿಗುರು ದಕ್ಷಿಣಾಮೂರ್ತಿ, ದತ್ತಾತ್ರೇಯರು,ಶಂಕರ ಭಗವತ್ಪಾದಾಚಾರ್ಯರಾದಿಯಾಗಿ ಮೊದಲ್ಗೊಂಡು ಆವೀರ್ಭವಿಸಿದ ಗುರುಪರಂಪರೆ,ತಮ್ಮ ಶಿಷ್ಯ ಪ್ರಶಿಷ್ಯರೆಲ್ಲರ ಮೂಲಕ ನಿರಂತರ ವಿಜೃಂಭಿಸುತ್ತಾ ಇಡೀ ಜೀವಸಂಕುಲದ ಮೇಲೆ ತನ್ನ ಕೃಪಾವರ್ಷವನ್ನು ಸುರಿಸಿ ಸನಾತನ ಧರ್ಮದ ರಕ್ಷಕವಚವಾಗಿ ಕಾರ್ಯ ನಿರ್ವಹಿಸುತ್ತ ಧರ್ಮಜಾಗೃತಿ ಮಾಡುತ್ತಲೇ ಸಾಗಿದೆ. ಜ್ಞಾನ,ಭಕ್ತಿ,ವೈರಾಗ್ಯ ಈ ಮೂರೂ ಮಾರ್ಗಗಳಲ್ಲಿ ಅನೇಕ ಮಹಾ-ಮಹಿಮಾನ್ವಿತರು. ಸಾಧು-ಸಂತರು, ಹಂಸ-ಪರಮಹಂಸರು,ಚಿದ್ಗನರು,ಅವಧೂತರು, ಪರಿವ್ರಾಜಕ ಸನ್ಯಾಸಿಗಳು ದಾರ್ಶನಿಕರು, ತತ್ವಜ್ಞಾನಿಗಳು, ಬ್ರಹ್ಮಜ್ಞಾನಿಗಳು, ಈ ಭೂಲೋಕದ ಮೇಲೆ ಅವತರಿಸಿ ತಮ್ಮ ಜೀವಿತ ವೃತ್ತಾಂತಗಳ ಮೂಲಕ ಪಂಡಿತ-ಪಾಮರಾದಿಯಲ್ಲರಿಗೂ ಆಧ್ಯಾತ್ಮ ಸಾಧನೆಯ ದಾರಿದೀಪವಾಗಿದ್ದಾರೆ.

ಅಕ್ಷರತ್ವಾದ್ವರೇಣ್ಯತ್ವಾಧೂತ ಸಂಸಾರ ಬಂಧನಾತ್ ತತ್ವಮಸ್ಯಾದಿ ಲಕ್ಞ್ಯತ್ವಾದವಧೂತ ಇತೀರ್ಯತೇ

-ಎಂಬ ಉಕ್ತಿಗನುಗುಣವಾಗಿ ಆತ್ಮಜ್ಞಾನದ ಆತ್ಯಂತಿಕ ಸ್ಥಿತಿಯೇ ಅವಧೂತಾವಸ್ಥೆ. ಜಾತಿ,ಮತ,ವೇದ,ವಾದ, ಇನ್ನಿತರ ಯಾವುದೇ ವಾಸನೆಯ ಸಂಕೋಲೆಗೂ ನಿಲುಕದೆ ಇಡೀ ಜೀವ ಸಮುದಾಯದ ಮೇಲೆ ತನ್ನ ಕೃಪಾಸಿಂಚನವನ್ನು ಅವಿರತವಾಗಿ ಸುರಿಸಿ ಜೀವಿಯ ಜೀವಭಾವ ತೊಲಗಿಸಿ ಆತ್ಮಭಾವದ ನೆಲಗಟ್ಟಿನಲ್ಲಿ ನಿಲ್ಲಿಸುವ ಏಕೈಕ ಅಖಂಡ ತತ್ವವೆಂದರೆ ಅದೇ ಅವಧೂತತತ್ವ, ಗುರುತತ್ವ. ಶಿಸ್ತು,ಸಂಯಮ,ಶ್ರಧ್ಧೆ ತ್ಯಾಗಮೂರ್ತಿಗಳಾದ ಕೀರ್ತಿಶ್ರೇಷ್ಠ ವೇ||ಬ್ರ||ಶ್ರೀ|| ಶ್ರೀಮಾನ್ ಶ್ರೀನಿವಾಸಯ್ಯ ಹಾಗೂ ಅವರ ಸಹಧರ್ಮಿಣಿ ಮಾ|| ಸೌ|| ಶಾರದಮ್ಮ ಇವರ ಗರ್ಭಸುಧಾಂಬುದಿಯಲ್ಲಿ ಅಡಕವಾಗಿದ್ದ ಗುರುತತ್ವವು ಶ್ರೀ ವಿಕ್ರಮ ನಾಮ ಸಂವತ್ಸರದ ಮಾರ್ಗಶೀರ್ಷ ಬಹುಳ ಷಷ್ಠಿಯೆಂದು ಅವತರಿಸಿ ಭೂಮಿಯ ಮೇಲೆ ತನ್ನ ಪದ್ಮಪಾದವನ್ನು ಊರಿ ಜೀವ ಸಂಕುಲದ ಸರ್ವತೋಮುಖ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿಯುವ ಸಲುವಾಗಿ ದೇಹಧರಿಸಿ ಶ್ರೀ ವೇಂಕಟಾಚಲಯ್ಯರೆಂಬ ಸಾರ್ಥಕ ನಾಮಾಂಕಿತರಾಗಿ ಯಾವುದಕ್ಕೂ ಅಂಟದೆ ಸಾಮಾನ್ಯ ಲೌಕಿಕರಂತೆಯೂ ಕೆಲ ವರ್ಷಗಳು ಜೀವನ ನಡೆಸಿ ಜೊತೆ ಜೊತೆಯಲ್ಲಿಯೇ ಲೌಕಿಕ ಜೀವನದ ಸಾರಸರ್ವಸ್ವವನ್ನು ಹೆಜ್ಜೆ ಹೆಜ್ಜೆಗೂ ಅವಲೋಕಿಸುತ್ತಾ ಕಠಿಣ ಪರಿಶ್ರಮದಿಂದ ಅಜ್ಞಾತ ಸಾಧನೆಗೈಯುತ್ತಾ ತೋರಿಕೆಗಾಗಿ ಏನ್ನನ್ನೂ ಮಾಡದೆ ಯಾರನ್ನೂ ಯಾವುದನ್ನೂ ಹಗೂರವಾಗಿ ಕಾಣದೆ ಸಾಧನೆಯ ಪರಾಕಾಷ್ಠೆಯನ್ನು ತಲುಪಿ, ಗುರುನಾಥ,ಅವಧೂತ ಎಂಬಿತ್ಯಾದಿಯಾಗಿ ಜಗವು ಗುರುತಿಸಿದರೂ ಅದಕ್ಕೂ ಅಂಟದೆ ಗುರುಭಕ್ತಿ, ಗುರುಸೇವೆ, ಜೀವಿಗಳೆಲ್ಲರ ಸತ್ಕಾರ ಇವುಗಳಲ್ಲಿಯೇ ಸ್ವತಃ ತಾವೇ ತುಂಬು ಪ್ರೀತಿಯಿಂದ ಪಾಲ್ಗೊಂಡು ಧರ್ಮ ಜಾಗೃತಿ ಮಾಡುತ್ತಾ ಜೊತೆಜೊತೆಗೆ ತಮ್ಮ ಶಿಷ್ಯರು,ಭಕ್ತರೂ,ಮೋಕ್ಷಾರ್ಥಿಗಳಾದಿಯಾಗಿ ಎಲ್ಲರನ್ನೂ ಜಾಗೃತಗೊಳಿಸುತ್ತಾ ಸರ್ವಸಮಾನತೆಯನ್ನು, ಸಹಬಾಳ್ವೆಯನ್ನೂ ಅನೇಕ ಜ್ವಲಂತ ದೃಷ್ಠಾಂತಗಳ ಮೂಲಕ ಉಚ್ಚರಿಸುತ್ತಾ ಗುರುತತ್ವ ಸಾರವನ್ನು ಈ ಪುಣ್ಯ ಭೂಮಿಗೆ ಧಾರೆಯೆರೆದು ಯಾವ ನಂಟಿಗೂ, ಗಂಟಿಗೂ ಅಂಟದೆ ಲೌಕಿಕದಲ್ಲಿದ್ದು ಪಾರಮಾರ್ಥ ಸಾಧನೆಯನ್ನು ಮಾಡಬಹುದೆಂದು ತೋರಿಸಿಕೊಟ್ಟು ತನ್ನೆಲ್ಲಾ ತಪ್ಪಸ್ಸು ಸಾಧನೆಗಳಾದಿಯಾಗಿ ಎಲ್ಲವನ್ನೂ ಈಶ್ವರಾರ್ಪಣೆ ಮಾಡಿ ದೇಹ ವಿಸರ್ಜಿಸಿ ಅಖಂಡ ಪ್ರಜ್ಞೆಯ ಮೂಲಕ ಈಗಲೂ ಎಲ್ಲರ ಹೃನ್ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

||ಸ್ವಾತ್ಮಾರಾಮಂ ನಿಜಾನಂದಂ ಶೋಕಮೋಹ ವಿರ್ವಜಿತಂ ಸ್ಮರಾಮಿ ಮನಸಾನಿತ್ಯಂ ಶ್ರೀ ವೇಂಕಟಾಚಲ ದೇಶಿಕಂ||

ತತ್ವವೇತ್ತಾ ಆತ್ಮಾರಾಮರಾದ ಸದ್ಗುರು ಅವಧೂತ ವೇಂಕಟಾಚಲ ಗುರುನಾಥರು ತಮ್ಮ ಚಿಕ್ಕ ವಯಸ್ಸಿನಲ್ಲಿ ಹಾಸನದ ಅರಸೀಕೆರೆ ತಾಲೋಕು ಬಾಣಾವರದ ತಮ್ಮ ಮಾವನವರ ಮನೆಯಲ್ಲಿ ವೇದಮಂತ್ರ ಕಲಿಯುತ್ತಿದ್ದ ದಿನಗಳಲ್ಲಿ ಭಗವಂತನಿಂದ ಅವರಿಗೆ ದೃಷ್ಟಾಂತವೊಂದು ಪ್ರಾಪ್ತವಾಯಿತು. ವಿಶಾಲವಾದ ಮಾವಿನ ತೋಟದಲ್ಲಿ ಗುರುಗಳಿಂದ ಪಾಠ ನಡೆಯುತ್ತಿರುತ್ತೆ,ಅದೇ ಸಂದರ್ಭದಲ್ಲಿ ವಯೋವೃದ್ಧೆಯೊಬ್ಬರು ಇವರ ಹತ್ತಿರ ಬಂದು "ಮಗು ನಿನಗೆ ಹಸಿವಾಗಿದೆ ಈ ಮೊಸರನ್ನವನ್ನು ಸ್ವೀಕರಿಸು ಎಂದು ಬಾಲ್ಯಾವಸ್ಥೆಯಲ್ಲಿನ ಗುರುಗಳ ಕೈಗೆ ಮೊಸರನ್ನದ ಪ್ರಸಾದವನ್ನು ನೀಡಿ, ಸ್ವೀಕರಿಸು" ಎಂದರು.

ನಂತರ ನೋಡುನೋಡುತ್ತಿದ್ದಂತೆ ಆ ವೃದ್ಧೆ ಅಲ್ಲಿಯೇ ಇದ್ದ ಶ್ರೀ ಶ್ರೀ ಶ್ರೀ ನಾರಾಯಣ ಯೋಗೀಂದ್ರ ಸರಸ್ವತೀ ಪರಮಹಂಸರ ವೃಂದಾವನದೊಳಗೆ ಅದೃಶ್ಯರಾದ ದೃಶ್ಯವನ್ನು ಗಮನಿಸುತ್ತಾ ಆಶ್ಚರ್ಯಚಕಿತನಾಗಿ ನಿಂತಿದ್ದ ಆ ಬಾಲಕನಿಗೆ ಚಿನ್ನ,ಬೆಳ್ಳಿ, ರತ್ನಗಳ ಭಂಡಾರ,ಬೆಟ್ಟ ಗುಡ್ಡಗಳ ಸಾಲು,ರಾಜರು,ಮಂತ್ರಿಗಳು,ಆನೆ ಕುದುರೆಗಳು ಕೂಡ ಪ್ರತ್ಯಕ್ಷವಾಗಿ ಆಶ್ಚರ್ಯ ಇಮ್ಮಡಿಯಾಗುತ್ತೆ. ಅದೇ ಸಂದರ್ಭದಲ್ಲಿ ಅಶರೀರ ವಾಣಿಯೊಂದು "ಮಗು ಇದು ಭೋಗ ಸಾಮ್ರಾಜ್ಯ ನೀನು ಇಚ್ಛಿಸಿದಲ್ಲಿ ಇವೆಲ್ಲವೂ ನಿನ್ನದೆ|! ಇಲ್ಲವಾದಲ್ಲಿ "ನಾನೇ" ಬೇಕು ಎಂದಾದರೆ ಯೋಗ ಸಾಮ್ರಾಜ್ಯ ನಿನ್ನದಾಗುತ್ತದೆ". ಹೇಳು ಮಗು ನಿನಗೆ ಏನು ಬೇಕು? ಎಂದು ಪ್ರಶ್ನಿಸಿದ ಅಶರೀರವಾಣಿಯ ಭೋಗ ಸಾಮ್ರಾಜ್ಯದ ಲಾಲಸೆಗೆ ಒಳಗಾಗದ ಆ 8 ವರ್ಷದ ಎಳೆಯ ಬಾಲಕ ಆಯ್ದುಕೊಂಡದ್ದು ಯೋಗ ಸಾಮ್ರಾಜ್ಯವನ್ನು- ಆ ಪುಟ್ಟ ವಯಸ್ಸಿನಲ್ಲೇ ಗುರುಗಳ ಆತ್ಮದ ಮಟ್ಟ ಯಾವ ಹಂತದಲ್ಲಿತ್ತೆಂದು ಈ ನೈಜ ಘಟನೆಯಿಂದ ತಿಳಿಯಬಹುದು.

> ಹುಟ್ಟಿದ ಊರು ಸಖರಾಯಪಟ್ಟಣವಾದರೂ, ಅವರ ತಪೋಭೂಮಿ,ಯೌಗಿಕ ಶಕ್ತಿಕೇಂದ್ರ ಲೀಲಾಕ್ಷೇತ್ರ, ಪ್ರೀತಿಪಾತ್ರವಾದ ಸ್ಥಳವೆಂದರೆ ಅದು "ಬಾಣಾವರವೇ".ಈ ಪುಣ್ಯಭೂಮಿಯಲ್ಲಿರುವ ಪ್ರತಿ ಕಣಕಣವು ಗುರುವರ್ಯರ ತತ್ವವನ್ನು,ಸತ್ವವನ್ನು,ಹೀರಿಕೊಂಡು ಬರೀ ಮಣ್ಣಾಗಿರದೆ, ಜಾಗೃತ ಕಣ್ಣಾಗಿದೆ. ಈ ತಪೋಭೂವಿಯಲ್ಲಿ ಮಹಾತಪೋನಿಷ್ಠರು, ಬ್ರಹ್ಮನಿಷ್ಠ ಸದ್ಗುರುಗಳಾದ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಸಂಜೀವಿನಿ ವೃಂದಾವನದ ಜೊತೆಗೆ ಸುತ್ತಮುತ್ತಲೂ ಯತಿಶ್ರೇಷ್ಠ ತಪಸ್ವಿಗಳನೇಕರ ವೃಂದಾವನಗಳ ಸನ್ನಿಧಾನದಲ್ಲಿ ಆಗುವ ಅಸಾಧಾರಣ ಯೌಗಿಕ ಅಲೌಕಿಕ ಅನುಭವಗಳು ಆಸ್ತಿಕ ಭಕ್ತರನೇಕರ ಅನುಭವಗಮ್ಯ ಜ್ವಲಂತ ಉದಾಹರಣೆಗಳು ಸಾಕಷ್ಟಿವೆ. ಇವೆಲ್ಲವೂ ಇಂದಿಗೂ ಜೀವಂತಿಕೆಯಿಂದಿರುವ ಬ್ರಹ್ಮನಿಷ್ಠ ಸದ್ಗುರು ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಹಾಗೂ ಅವರ ಶಿಷ್ಯೋತ್ತಮ ಗುರುವರ್ಯನೇಕರ ಲೀಲಾವೈಭವವಲ್ಲದೆ ಮತ್ತೇನು ಇಲ್ಲ.

ಸುಮಾರು ನಾಲ್ಕು ಶತಮಾನದ ಪೂರ್ವದಲ್ಲಿ ಬಾಣಾವರದ ಈ ಪುಣ್ಯ ಭೂಮಿಯಲ್ಲಿ ಪ್ರತ್ಯಕ್ಷವಾದ ಮಹಾಮಹಿಮಾನ್ವಿತ,ಅಸಾಧಾರಣ ತಪೋನಿಷ್ಠ ಸದ್ಗುರುವರ್ಯರಾದ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರು ಅನೇಕ ಲೀಲಾವೈಭವವನ್ನು ತೋರಿಸಿ ಅನೇಕ ಸದ್ಭಕ್ತರಿಗೆ ಶಿಷ್ಯತ್ವವನ್ನು ಅನುಗ್ರಹಿಸಿ ಧರ್ಮಜಾಗೃತಿಯನ್ನು ಮಾಡಿರುವುದು. ಅದೇ ಕಾಲದಲ್ಲಿ ಕಾಶೀ ವಿಶ್ವೇಶ್ವರನ ದರ್ಶನವನ್ನು ಮಾಡಬೇಕೆಂದು ಹಂಬಲಿಸಿದ ತಮ್ಮ ಮಾತೃಶ್ರೀಯವರಿಗೆ ಅವರ ಸ್ವಗೃಹದಲ್ಲಿಯೇ ಗಂಗೆಯ ಆವಾಹನೆಯನ್ನು ಮಾಡಿ ಅಲ್ಲಿಯೇ ಪವಿತ್ರವಾದ ತೀರ್ಥಸ್ನಾನವನ್ನು ಮಾಡಿಸಿ ಕುಳಿತಲ್ಲಿಯೇ ಕಾಶಿಯ ವಿಶ್ವೇಶ್ವರನ ದರ್ಶನವನ್ನು ಮಾಡಿಸಿ ತಾಯಿಯವರ ಬೃಹದಾಸೆಯನ್ನು ನೆರೆವೇರಿಸಿದರು.ಪೂಜ್ಯರ ಮನೆಯಲ್ಲಿ ತಪಃಶ್ಚರ್ಯೆಗೆ ಆಶ್ಚರ್ಯ ಪಡುವುದರ ಜೊತೆಗೆ ಅವರ ಪ್ರಭಾವಲಯಕ್ಕೆ ಎಲ್ಲ ಭಕ್ತರೂ ಒಳಗಾಗಿ ಧನ್ಯರಾದರು. ಸುಮಾರು 4 ಶತಮಾಗಳ ಹಿಂದೆ ಅವತರಿಸಿ ಅನೇಕ ಲೀಲಾವೈಭವಗಳನ್ನು ಸಂದರ್ಭೋಚಿತವಾಗಿ ನಡೆಸಿ ಧರ್ಮಜಾಗೃತಿ ಮಾಡಿ, ಆ ತನ್ಮೂಲಕ ಲೋಕೋಧ್ಧಾರ ಮಾಡಿ ನಂತರ ಸಜೀವ ಸಮಾಧಿಸ್ಥರಾಗಿರುವ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಮತ್ತು ಅವರ 24 ಯತಿವರ್ಯ ಶಿಷ್ಯರ ಅದರಲ್ಲೂ ಅತೀ ಪ್ರಮುಖ ಶಿಷ್ಯರಾದ ಶ್ರೀ ಶ್ರೀ ಶ್ರೀ ನಾರಾಯಣ ಯೋಗೀಂದ್ರ ಸರಸ್ವತೀ ಪರಮಹಂಸರ ವೃಂದಾವನ, ಈ ಎಲ್ಲ ವಿಷಯಗಳನ್ನು ತಿಳಿಸಿ ಅನೇಕ ವೃಂದಾವನವನ್ನು ಬಾಣಾವರದಲ್ಲಿ ಗುರುತಿಸಿ ಶ್ರೀ ಶ್ರೀ ಶ್ರೀ ಕೃಷ್ಣಯೋಗೀಂದ್ರ ಸರಸ್ವತೀ ಪರಮಹಂಸರ ಮರು ಅವತಾರವೇ ತಾವು ಎಂದು ಶೃತಪಡಿಸಿದವರು ನಮ್ಮ ಸದ್ಗುರುನಾಥ ಶ್ರೀ ವೇಂಕಟಾಚಲ ಅವಧೂತರೇ.

ಅಸಾಧಾರಣ ತಮೋನಿಷ್ಣರು ತಮ್ಮ ಗುರುಗಳ ಪ್ರೀತಿಪಾತ್ರ ಸಚ್ಛಿಷ್ಯರು ಗುರುವಾಕ್ಯ ಪರಿಪಲಕರು ಆದ ಶ್ರೀ ಶ್ರೀ ಶ್ರೀ ನಾರಾಯಣ ಯೋಗೀಂದ್ರ ಯತಿವರ್ಯರು ಬಹುಕಠಿಣ ಖೇಚರಿಯೋಗ ವಿದ್ಯೆಯಲ್ಲಿ ಅಪಾರ ಪರಿಶ್ರಮ ಹೊಂದಿದವರು. ಅದನ್ನು ಕರಗತಮಾಡಿಕೊಂಡ ಯೋಗನಿಷ್ಣಾತರು.ಇದಕ್ಕೆ ಪೂರಕವಾಗಿ ಅವರು ಸಮಾಧಿಸ್ಥರಾಗಿರುವ ಶಿಲಾವೃಂದಾವನದ ಮೇಲೆ ಕೆತ್ತಲ್ಪಟ್ಟಿರುವ ಯೌಗಿಕ ಮುದ್ರೆಗಳು ಸಾಕ್ಷಿಭೂತವಾಗಿದೆ.

ಗುರುವಾಕ್ಯ ಪ್ರಮಾಣ" ಗುರುನಾಥರ ವಾಣಿಗನುಗುಣವಾಗಿಯೇ ಗುರುವಾಕ್ಯ ಪರಿಪಾಲನೆಯ ಏಕಮಾತ್ರ ಸದುದ್ದೇಶದಿಂದ ಅಡೆತಡೆಗಳಿಲ್ಲದೆ ಚಿದಂಬರ ನಾಮಸ್ಮರಣೆ, ಸಾಂಪ್ರದಾಯಕ ವೀಣಾವಾರಿಕರಿ, ಸಾಮೂಹಿಕ ಗುರುಚರಿತ್ರೆ ಪಾರಾಯಣ ಇತ್ಯಾದಿ ಆಧ್ಯಾತ್ಮಿಕ ಸೇವಾಕೈಂಕರ್ಯಗಳು ಗುರುದೇವತಾ ಸಂಕಲ್ಪದಂತೆ ಸುಗಮವಾಗಿ ನಡಿದುಕೊಂಡು ಬರುತ್ತಿದೆ